ದಾಂಡೇಲಿ -
ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಒಂದು ಪಟ್ಟಣ. ಹಳಿಯಾಳದಿಂದ 22ಕಿಮೀ. ಮತ್ತು ಹುಬ್ಬಳ್ಳಿಯಿಂದ 78 ಕಿಮೀ. ದೂರದಲ್ಲಿ ಪಶ್ಚಿಮ ಘಟ್ಟದ ದಟ್ಟಕಾಡಿನ ನಡುವೆ ಕಾಳಿ ನದಿಯ ಬಳಿ ಇದೆ. ಜನಸಂಖ್ಯೆ 53,290 (2001). ಸುತ್ತಣ ಅರಣ್ಯದಲ್ಲಿ ಮತ್ತಿ, ಹೊನ್ನೆ, ನಂದಿ, ಬೀಟೆ, ತೇಗು, ಬಿದಿರು ಮುಂತಾದ ಉತ್ಪನ್ನಗಳು ಹೇರಳವಾಗಿ ಸಿಗುತ್ತವೆ. ಇಲ್ಲಿ ಸ್ಥಾಪಿತವಾಗಿರುವ ಕಾರ್ಖಾನೆಗಳಿಂದಾಗಿ ಇದೊಂದು ಕೈಗಾರಿಕಾ ಪಟ್ಟಣವಾಗಿ ಬೆಳೆಯುತ್ತಿದೆ. ಕಾಗದ, ಪ್ಲೈವೂಡ್, ಫೆರೊಮ್ಯಾಂಗನೀಸ್, ಮರಕೊಯ್ಯವುದು-ಇವು ಇಲ್ಲಿಯ ಮುಖ್ಯ ಕೈಗಾರಿಕೆಗಳು. ಕಾಗದ ಕಾರ್ಖಾನೆ 1955ರಲ್ಲಿ ಸ್ಥಾಪಿತವಾಗಿ 1958ರಲ್ಲಿ ಉತ್ಪಾದನೆ ಆರಂಭಿಸಿತು. ಇದರಲ್ಲಿ 2,120 ಕಾರ್ಮಿಕರು ದುಡಿಯುತ್ತಿದ್ದಾರೆ. 1973-74ರಲ್ಲಿ ಇದರ ಉತ್ಪಾದನೆ 50 ಸಾವಿರ ಟನ್ ಕಾಗದ, ಇದನ್ನು ವಿಸ್ತರಿಸಲಾಗುತ್ತಿದೆ. ಕಾರ್ಖಾನೆಗೆ ಬೇಕಾದ ಬಿದಿರು ಮುಂತಾದ ಕಚ್ಚಾ ಸಾಮಗ್ರಿ ಸುತ್ತಮುತ್ತ ದೊರಕುತ್ತದೆ. ಪ್ಲೈವುಡ್ ಕಾರ್ಖಾನೆ 1944ರಲ್ಲಿ ಸ್ಥಾಪಿತವಾಯಿತು. ಈ ಕಾರ್ಖಾನೆ ಪ್ರಾರಂಭವಾದಾಗ ದಾಂಡೇಲಿಯ ಜನಸಂಖ್ಯೆ ಕೇವಲ 500 ಆಗಿತ್ತು. ಅದು ಮಲೇರಿಯಾ ಕೇಂದ್ರವಾಗಿತ್ತು. ಈ ಕಾರ್ಖಾನೆಯ ಆಡಳಿತ ನಡೆಸುತ್ತಿರುವ ಸಂಸ್ಥೆ ಚಿಪ್‍ಬೋರ್ಡ್ ಕಾರ್ಖಾನೆಯನ್ನೂ ದಾಂಡೇಲಿಯಲ್ಲಿ ತೆರೆದಿದೆ. ಫೆರೊ-ಮ್ಯಾಂಗನೀಸ್ ಕಾರ್ಖಾನೆ 1956ರಲ್ಲಿ ಸ್ಥಾಪಿತವಾಗಿ 1957ರಲ್ಲಿ ಉತ್ಪಾದನೆಯನ್ನು ಆರಂಭಿಸಿತು. ಭಾರತದಲ್ಲಿ ಮೊಟ್ಟ ಮೊದಲು ಫೆರೊ-ಮ್ಯಾಂಗನೀಸ್ ಉತ್ಪಾದನೆಯಾಗತೊಡಗಿದ್ದು ಇಲ್ಲೇ. ಇದು ವಿಶ್ವದಲ್ಲೇ ಅತ್ಯತ್ತಮವೆಂದು ಪರಿಗಣಿತವಾಗಿದೆ. ಮರಕೊಯ್ಯುವ ಕಾರ್ಖಾನೆ ಸರ್ಕಾರಿ ವಲಯದ ಕೈಗಾರಿಕೆ. ಇದನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. ರೈಲ್ವೆ ಸ್ಲೀಪರ್ ಇದರ ಒಂದು ಮುಖ್ಯ ಉತ್ಪಾದನೆ. ಕಾರ್ಖಾನೆಗೆ ಬೇಕಾದ ಮರವನ್ನು ದಾಂಡೇಲಿಯ ಮರದ ಡಿಪೊ ಪೂರೈಸುತ್ತದೆ. ಇಲ್ಲಿ ಪೀಠೋಪಕರಣಗಳೇ ಮುಂತಾದವನ್ನು ತಯಾರಿಸುವ ವಿಭಾಗವನ್ನೂ ತೆರೆಯಲು ಅರಣ್ಯ ಇಲಾಖೆ ಆಲೋಚಿಸುತ್ತಿದೆ.

ದಾಂಡೇಲಿಯಲ್ಲಿ 11 ಪ್ರಾಥಮಿಕ ಶಾಲೆಗಳೂ 4 ಪ್ರೌಢಶಾಲೆಗಳೂ 1 ಜ್ಯೂನಿಯರ್ ಕಾಲೇಜು 1 ಪ್ರಥಮದರ್ಜೆ ಕಾಲೇಜೂ ಇವೆ. ದಾಂಡೇಲಿಯ ಸುತ್ತ ಮುತ್ತ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಕವಲ ಗುಹೆ, ನಾಗಝರಿ ದೃಶ್ಯ ಸ್ಥಳ, ಸಿಂಥೇರಿ ಬಂಡೆ, ಕಾಳಿ ಜಲವಿದ್ಯುತ್ ಯೋಜನೆಗಳು ಕಚೇರಿಗಳ ಕೇಂದ್ರ ಅಂಬಿಕಾನಗರ ದಾಂಡೇಲಿಯ ಬಳಿ ಇವೆ. ದಾಂಡೇಲಿಗೆ 20 ಕಿಮೀ. ದೂರದಲ್ಲಿರುವ ಉಳವಿಯಲ್ಲಿ ನಡೆಯುವ ಬಸವೇಶ್ವರರ ವಾರ್ಷಿಕ ಜಾತ್ರೆ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿದೆ. ದಾಂಡೇಲಿಯಿಂದ ಅರಣ್ಯೋತ್ಪನ್ನಗಳು ಹಲವು ಕಡೆಗಳಿಗೆ ಸಾಗುತ್ತವೆ. ದಾಂಡೇಲಿಗೆ ರಸ್ತೆ ಮತ್ತು ರೈಲ್ವೆ ಸಂಪರ್ಕವುಂಟು. ದಾಂಡೇಲಿಗೆ ಸಮೀಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಖ್ಯ ಅರಣ್ಯಧಾಮ ಇದೆ. ಇಲ್ಲಿ ವನ್ಯಮೃಗಗಳನ್ನು ರಕ್ಷಿಸಲಾಗುತ್ತಿದೆಯಲ್ಲದೆ ಅನೇಕ ಅರಣ್ಯ ಸಸಿಗಳನ್ನು ನಟ್ಟು ಬೆಳೆಸಲಾಗುತ್ತಿದೆ.

ದಾಂಡೇಲಿ ಶಬ್ದ ದಂಡಕ ಅರಣ್ಯ ಎಂಬುದರಿಂದ ಬಂದಿದೆಯೆಂದೂ ಪಾಂಡವರು ಅಜ್ಞಾತವಾಸ ಮಾಡುತ್ತಿದ್ದಾಗ ಇಲ್ಲಿದ್ದರೆಂದೂ ಹೇಳಲಾಗಿದೆ. ಕದಂಬರು ಬನವಾಸಿಯಲ್ಲಿ ಆಳುತ್ತಿದ್ದಾಗ ದಂಡೇಲಿ ಅವರ ಆಡಳಿತಕ್ಕೆ ಸೇರಿತ್ತು. ಆಗ ಕದಂಬರಾಜ್ಯ ಸಾರಂಗಧರ ಬೆಟ್ಟದಿಂದ (ಇಂದಿನ ರಾಜಮಹೇಂದ್ರಿ) ಪಶ್ಚಿಮದ ರತ್ನಾಗಿರಿಯವರೆಗೂ ಹಬ್ಬಿತ್ತು. ಕದಂಬರೂ ಕಟ್ಟಿಸಿದ 101 ಕೋಟೆಗಳ ಪೈಕಿ ಕರಿಹೊಳೆಯಂಚಿನ (ಕಾಳಿ) ಹಿರೇಬಿದರವಳ್ಳಿ ಕೋಟೆಯೂ ಒಂದೆಂದೂ ಹಿರೇಬಿದರವಳ್ಳಿಯೇ ದಂಡವಲಿಯಾಗಿ ಇಂದು ದಾಂಡೇಲಿಯೆನಿಸಿದೆಯೆಂದೂ ಹೇಳಲಾಗಿದೆ. ಈ ಕೋಟೆಯಲ್ಲಿ ಚತುರಂಗ ಬಲವನ್ನಿಡಲಾಗಿತ್ತು. ಸಂಗರಮಲ್ಲನಾಯಕನೆಂಬ ಪಾಳೆಯಗಾರ ಇದನ್ನಾಳುತ್ತಿದ್ದ. ಅವನಿಗೆ ಗೋವೆಯ ಕಾಂದಭನೆಂಬ ಪ್ರಧಾನ ಮಂತ್ರಿಯೂ ಗುಂದದ ಹೆಗ್ಗಡೆಯೆಂಬ ಉಪಮಂತ್ರಿಯೂ ಇದ್ದರು. 1,200 ವರ್ಷಗಳ ಹಿಂದೆ ಈ ಮಹಾನಗರದ ವಿಸ್ತೀರ್ಣ ಹನ್ನೆರಡು ಮೈಲಿಗಳಿದ್ದು, ಇಲ್ಲಿ ಒಂದು ಲಕ್ಷಕ್ಕೂ ಮಿಕ್ಕು ಜನವಸತಿಯಿತ್ತೆನ್ನಲಾಗಿದೆ. ಊರಿನಲ್ಲಿ ಒಂದೊಂದು ಉಪಗ್ರಾಮಕ್ಕೆ ಒಂದೊಂದು ಹೆಸರಿಟ್ಟು ನಗರವನ್ನು ವಿಭಜಿಸಲಾಗಿತ್ತು. ಈ ಹೆಸರುಗಳಲ್ಲಿ ಕೆಲವು ಇಂದೂ ಉಳಿದುಬಂದಿವೆ. ವೀರರೆಂದು ಕರೆಯಲ್ಪಡುವ ಸೇನಾನಾಯಕರು ವಾಸಿಸುತ್ತಿದ್ದ ಹಳ್ಳಿ ಬೀರಪಲ್ಲಿ. ಅಂದು ರಾಜ್ಯದಲ್ಲಿ ಖ್ಯಾತ ಮಲ್ಲಯುದ್ಧ ಪಟುವಾದ ಕರಿಯಾ ಜೆಟ್ಟಿಗೆ ದತ್ತಿಯಾಗಿ ಕೊಟ್ಟ ಗ್ರಾಮ ಕರಿಯಾಂದಳ್ಳಿ. ಹತ್ತು ಲಕ್ಷ ಜನರಿಗೆ ಬೇಕಾದಷ್ಟು ಮಣ್ಣಿನ ಪಾತ್ರೆ ಮಾಡಿ ಪೂರೈಸುವ ನೂರಾರು ಕುಂಬಾರರ ಕುಟುಂಬಗಳನ್ನೊಳಗೊಂಡಿದ್ದ ಊರು ಕುಂಬಾರ ಕೊಪ್ಪ (ಹಳೆ ದಾಂಡೇಲಿ). ಬೇಡಸಂಕುಲದ ರಾಜ ಸಂಗರಮಲ್ಲ ನಾಯಕ ತನ್ನವರಿಗಾಗಿ ನಿರ್ಮಿಸಿದ ಪಟ್ಟಣ ಬೇಡರ ಶಿರಗೂರು. ಅಲ್ಲಿ ಜೈನ ಬಸದಿಗಳೂ ಈಶ್ವರ ದೇವಾಲಯಗಳೂ ವೈಷ್ಣವ ದೇವಾಲಯಗಳೂ ರಾಜನ ಸರ್ವಧರ್ಮ ಸಮಾನ ದೃಷ್ಟಿಯ ಕುರುಹಾಗಿ ನೆಲೆನಿಂತಿದ್ದುವು. ರಾಜವಾಡೆಯ ಆನೆಗಳನ್ನು ಮೀಯಿಸಲು ಕಲ್ಲಿನ ಒಡ್ಡು ಕಟ್ಟಿ ಹೊಳೆಯ ನೀರನ್ನು ತಿರುವಿ ಮಾಡಲಾದ ಕೆರೆಯ ರೂಪದ ಮಡುವೇ ಕೆರವಾಡ. ನಗರವಾಸಿಗಳು ದೇವತಾರ್ಚನೆಗಾಗಿ ಉಪಯೋಗಿಸುವ ಧೂಪವನ್ನು ಹಾಲುಮಡ್ಡಿ ಎಂಬ ಮರದ ಅಂಟಿನಿಂದ ಮಾಡುತ್ತಿದ್ದರು. ಅದಕ್ಕಾಗಿ ಹಾಲುಮಡ್ಡಿ ಗಿಡಗಳನ್ನು ದೊಡ್ಡದಾದ ನಾಲೆಯುದ್ದಕ್ಕೂ ಬೆಳೆಸಿದ್ದರು. ಅದನ್ನು ಹಾಲುಮಡ್ಡಿ ನಾಲಾ ಎಂದು ಕರೆಯಲಾಗುತ್ತಿತ್ತು. ಅಂದು ರಾಣಿವಾಸದವರ ಮನೋಲ್ಲಾಸಕ್ಕಾಗಿ ನಿರ್ಮಿಸಿದ್ದ ಮಾವಿನತೋಪೇ ಇಂದಿನ ಕೋಗಿಲಬನ. ಅಂದು ಪ್ರಧಾನಿಗಳು ವಾಸಿಸುತ್ತಿದ್ದ ದಿವ್ಯ-ಭವ್ಯ ಸೌಧಗಳಿಂದ ಕೂಡಿದ ಸ್ಥಳ ಇಂದಿಗೂ ಪ್ರಧಾನಿಗ್ರಾಮವಾಗಿಯೇ ಉಳಿದಿದೆ. ಇಂದಿನ ರಿವರ್‍ವ್ಯೂ ಬಂಗ್ಲೆಯ ಎದುರು ಕಾಳಿ ನದಿ ಹರಿಯುತ್ತಿರುವ ಸ್ಥಳದಲ್ಲಿ ಹಿಂದೆ ಕೋಟೆಯಿತ್ತು. ಆಗ ಕಾಳಿ ನದಿ ಬೈಲಪಾರಾದಿಂದ ಕೋಗಿಲಬನದ ಕಡೆಗೆ ಹರಿಯುತ್ತಿತ್ತು. ಕಾಲಕ್ರಮದಲ್ಲಿ ನದಿ ಅಕ್ಕಪಕ್ಕವನ್ನು ಕೊರೆಯುತ್ತ ತನ್ನ ಪಾತ್ರವನ್ನು ಬದಲಾಯಿಸಿ ಉತ್ತರಾಭಿಮುಖವಾಗಿ ಹರಿಯಲಾರಂಭಿಸಿತು. ಕ್ರಮೇಣ ಕೋಟೆಯ ಪಕ್ಕದಲ್ಲಿಯ ನೀರಿನ ಕಾಲುವೆಯನ್ನು ಸೇರಿ ಕೋಟೆಯ ಬುನಾದಿಯನ್ನೇ ಕೊರೆದು ಉರುಳಿಸಿತು. ಕೋಟೆಯ ರಕ್ಷಾದೇವತೆಯಾದ ಮಾರುತಿಯ ಮೂರ್ತಿಯೂ ನದಿಯ ಪಾಲಾಗಿತ್ತು. ಈಚೆಗೆ ಅದು ಅರಣ್ಯಾಧಿಕಾರಿಗಳಿಗೆ ಸಿಕ್ಕಿತು. ಅವರು ಅದನ್ನು ಪುನಃ ಸ್ಥಾಪಿಸಿದ್ದಾರೆ. ಈ ಮೂರ್ತಿಯ ಶಿಲ್ಪ ಸುಮಾರು 12 ಶತಮಾನಗಳಷ್ಟು ಹಿಂದಿನದೆಂದು ಭಾವಿಸಲಾಗಿದೆ.

ಇದಕ್ಕೆ ಪೂರಕವಾದ ಒಂದು ಉಪಕೋಟೆ ಇಲ್ಲಿಂದ 6 ಮೈ. ದೂರದಲ್ಲಿರುವ ಗುತ್ತಿ ಎಂಬಲ್ಲಿದೆ. ಅಲ್ಲಿ ಈಗಲೂ ಸಾಕಷ್ಟು ಪ್ರಾಚೀನ ರಾಜಚಿಹ್ನೆಯ ಅವಶೇಷಗಳುಂಟು. ಬಿದಿರುವಳ್ಳಿಯ ಕೋಟೆಗೆ ಹೊರನಾಡಿನಿಂದ ಶತ್ರುಗಳು ಬರುತ್ತಿದ್ದರೆ ಅದರ ಸೂಚನೆ ಕೊಡುವುದಕ್ಕಾಗಿ ಬಿರುವಳ್ಳಿಯ ಗುಡ್ಡ, ಮಾವಳಿಂಗದ ಗುಡ್ಡ ಮತ್ತು ಕೊಂಕಣದ ಗುಡ್ಡಗಳ ಮೇಲೆ ಬುರುಜುಗಳನ್ನು ಸ್ಥಾಪಿಸಿದ್ದರು. ಆ ಬುರುಜುಗಳಿಂದ ಬಣ್ಣಬಣ್ಣದ ಬೆಂಕಿಯ ಹೊಗೆಯನ್ನು ಎಬ್ಬಿಸಿ, ಯಾವ ದಿಕ್ಕಿನಿಂದ ಶತ್ರು ಬರುತ್ತಿದ್ದಾನೆಂಬುದನ್ನು ಆಯಾ ಬಣ್ಣಗಳಿಂದಲೇ ತಿಳಿಸುತ್ತಿದ್ದರು. ಅಂದಿನ ಬಿದಿರುವಳ್ಳಿ 12 ಶತಮಾನಗಳ ಅನಂತರ ಒಂದು ಔದ್ಯಮಿಕ ಪಟ್ಟಣವಾಗಿ ಮಾರ್ಪಟ್ಟಿದೆ.								     (ವಿ.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ